Friday, December 21, 2007

ದಾರಿ ಯಾವುದಯ್ಯ ಬಂಡಾಜೆಗೆ?








ದಾರಿ ಯಾವುದಯ್ಯ ಬಂಡಾಜೆಗೆ?..


ಬಂಡಾಜೆ- ಪ್ರಕೃತಿಯ ಅವಿಸ್ಮರಣೀಯ ಸೌಂದರ್ಯ, ಸೊಬಗಿಗೆ ನಿದರ್ಶನ ಎಂದರೆ ತಪ್ಪಾಗದು. ಬಂಡಾಜೆ ಎಂಬುದು ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಒಂದು ಜಲಪಾತದ ಹೆಸರು. ಇದೇ ಕಾರಣಕ್ಕ ಇರಬಹುದು ಇಲ್ಲಿನ ಅರಣ್ಯ ಪ್ರದೇಶವನ್ನೂ ಬಂಡಾಜೆ ಎಂದೇ ಕರೆಯುತ್ತಾರೆ. ಇದು ಬೆಳ್ತಂಗಡಿ ತಾಲೂಕಿನಲ್ಲೇ ಅತಿ ದೊಡ್ಡ ಜಲಪಾತ.

ದಾರಿ ಯಾವುದಯ್ಯ ಬಂಡಾಜೆಗೆ?

ಬಂಡಾಜೆ ಜಲಪಾತ ಬೆಳ್ತಂಗಡಿ ತಾಲೂಕಿನ ವ್ಯಾಪ್ತಿಯಲ್ಲಿ ಬರುತ್ತದೆ. ಮಂಗಳೂರಿನಿಂದ ಬರುವವರಾದರೆ ಮೊದಲು ಉಜಿರೆಗೆ ಬರಬೇಕು. ಮಂಗಳೂರಿನಿಂದ ಉಜಿರೆಗೆ ೬೫ ಕಿಲೋ ಮೀಟರ್ ದೂರವಿದೆ. ಉಜಿರೆಯಿಂದ ಚಾರ್ಮಾಡಿಗೆ ಸಾಗುವ ಹಾದಿಯಲ್ಲಿ ೬ ಕಿಲೋ ಮೀಟರ್ ಕ್ರಮಿಸಿದರೆ ಮುಂಡಾಜೆ ಅಥವಾ ಸೋಮಂದಡ್ಕ ಎಂಬ ಪುಟ್ಟ ಊರು ಎದುರಾಗುತ್ತದೆ. ಬೆಂಗಳೂರಿನಿಂದ ಬರುವುದಾದರೆ ಮೂಡಿಗೆರೆ, ಚಾರ್ಮಾಡಿ ಮೂಲಕ ಬಂದು ಮುಂಡಾಜೆ ತಲುಪಬಹುದು. ಇಲ್ಲದಿದ್ದರೆ ಸಕಲೇಶಪುರದಿಂದ ಶಿರಾಡಿ ಘಾಟ್ ಇಳಿದು ಧರ್ಮಸ್ಥಳ ತಲುಪಿ ಅಲ್ಲಿಂದ ಉಜಿರೆಗೆ ಮೂಲಕವೂ ಮುಂಡಾಜೆ ತಲುಪಬಹುದು. ಇಲ್ಲಿಂದ ದಿಡುಪೆ ಮಾರ್ಗದಲ್ಲಿ ೮ ಕಿಲೋ ಮೀಟರ್ ಸಾಗಿದರೆ ಕಡಿರುದ್ಯಾವರ ಎದುರಾಗುತ್ತದೆ. ಇಲ್ಲಿಂದ ಬಲಕ್ಕೆ ಸಾಗಿದರೆ ವಳಂಬ್ರ ತಲುಪಬಹುದು. ಸ್ವಂತ ವಾಹನದಲ್ಲಿ ಬರುವುದಾದರೆ, ವಳಂಬ್ರ ಪರಿಸರದಲ್ಲೇ ವಾಹನ ನಿಲ್ಲಿಸಬೇಕಾಗುತ್ತದೆ. ಇಲ್ಲಿಂದ ಕಾಲ್ನಡಿಗೆಯಲ್ಲೇ ಸಾಗಬೇಕು.


ವಳಂಬ್ರದಿಂದ ಕಾಲು ಹಾದಿ ಆರಂಭವಾಗುತ್ತದೆ. ಸಣ್ಣ ಪುಟ್ಟ ಬೆಟ್ಟಗಳನ್ನು ಹತ್ತುತ್ತಾ, ಗೇರುಬೀಜದ ತೋಟದ ಮಧ್ಯದಿಂದ ಮುಂದೆ ಸಾಗಬೇಕು. ಮುಂದೆ ಸಾಗಿದಂತೆ ಅರಣ್ಯ ಆರಂಭವಾಗುತ್ತದೆ. ಇಲ್ಲಿಂದ ಮುಂದೆ ತುಂಬಾ ಎಚ್ಹರದಿಂದಿರಬೇಕು. ಅರಣ್ಯದೊಳಗೆ ಪ್ರವೇಶಿಸುವಲ್ಲಿ ಹತ್ತಾರು ಕಾಲುದಾರಿಗಳಿವೆ. ಊರ ಜನರು ಕಟ್ಟಿಗೆಗೆಂದು ತೆರಳುವ ಹಲವಾರು ಹಾದಿಗಳಿವೆ. ಆದುದರಿಂದ ಇಲ್ಲಿ ಹಾದಿ ತಪ್ಪಿದರೆ ತುಂಬಾ ಕಷ್ಟ. ಸಾಧ್ಯವಾದಷ್ಟು ದಾರಿ ಗೊತ್ತಿರುವ ಊರವರೊಬ್ಬರನ್ನು ಮಾರ್ಗದರ್ಶಕರಾಗಿ ಜೊತೆಗೆ ಕರೆದೊಯ್ಯುವುದು ಸೂಕ್ತ.

ವಳಂಬ್ರದಿಂದ ಸುಮಾರು ಎರಡು ಗಂಟೆ ನಡೆದರೆ ಸಣ್ಣದೊಂದು ನೀರಿನ ತೊರೆ ಸಿಗುತ್ತದೆ. ಬೇಸಗೆಯಲ್ಲಿ ಇಲ್ಲಿ ನೀರು ತುಂಬಾ ಕಡಿಮೆಯಿರುತ್ತದೆ. ಬಂಡಾಜೆ ಜಲಪಾತದ ನೀರೆ ಹರಿದು ಬಂದು ಈ ತೊರೆಗೆ ಸೇರುತ್ತದೆ. ತೊರೆಯ ಎಡಬದಿಯಿಂದ ೧ ಗಂಟೆ ನಡೆದರೆ ಬಂಡಾಜೆ ಜಲಪಾತ ಎದುರಾಗುತ್ತದೆ.
ಬೆಟ್ಟದ ಮೇಲಿನಿಂದ ಧುಮ್ಮಿಕ್ಕುವ 'ಬಂಡಾಜೆ 'ಯ ವೈಭವ ಅವರ್ಣನೀಯ. ಶ್ವೇತವಸ್ತ್ರಧಾರಿ 'ಬಂಡಾಜೆ'ಗೆ 'ಅಬ್ಬಿ' ಎನ್ನುವ ಇನ್ನೊಂದು ಹೆಸರೂ ಇದೆ. ಇದು ಊರವರ ಬಾಯಲ್ಲಿ ಹೆಚ್ಹು ಪ್ರಚಲಿತ. ಸುತ್ತಲೂ ದಟ್ಟ ಅರಣ್ಯ. ನಡುವೆ ಹಾಲಿನಂತೆ ಧುಮುಕುವ ಜಲಪಾತ.... ಅದನ್ನು ನೋಡಿಯೇ ತೀರಬೇಕು. ಜಲಪಾತದ ತಳಭಾಗದಲ್ಲಿ ಸಾಕಷ್ಟು ಬಂಡೆಕಲ್ಲುಗಳಿರುವುದರಿಂದ ಜಾರಿ ಬೀಳುವ ಸಾಧ್ಯತೆ ಹೆಚ್ಹಿದೆ. ಆದುದರಿಂದ ಇಲ್ಲಿ ಸಾಕಷ್ಟು ಜಾಗ್ರತೆ ವಹಿಸಬೇಕು.
ಇದೇ ಬಂಡಾಜೆಯ ಮೇಲ್ಭಾಗವನ್ಬು ತಲುಪಬೇಕಾದರೆ ಬಂದ ಹಾದಿಯಲ್ಲೇ ಸ್ವಲ್ಪ ಹಿಂದೆ ಬರಬೇಕು. ಮೊದಲೇ ಎದುರಾಗುವ ನೀರಿನ ತೊರೆಯನ್ನು ದಾಟಿ ಮುಂದೆ ಸಾಗಿದರೆ, ಬೃಹತ್ ವೃಕ್ಷಗಳಿಂದ ಕೂಡಿದ ದುರ್ಗಮ ಹಾದಿ ಎದುರಾಗುತ್ತದೆ. ಇದೇ ದುರ್ಗಮ ಹಾದಿಯಲ್ಲಿ ೨ ಗಂಟೆ ನಡೆಯಬೇಕು. ಸ್ವಲ್ಪ ಎಚ್ಹರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಮುಂದೆ ಸಾಗಿದಂತೆಲ್ಲ, ಪ್ರಾಣಿಗಳ ಸದ್ದು ಕೇಳುತ್ತದೆ. ೨ ಗಂಟೆಯ ಸತತ ನಡಿಗೆಯ ಬಳಿಕ ಅರಣ್ಯದ ಹಾದಿ ಕೊನೆಗೊಳ್ಳುತ್ತದೆ. ಇಲ್ಲಿಂದ ಮುಂದಕ್ಕೆ 'ದರ್ಭೆ' ಎಂದು ಕರೆಯಲ್ಪಡುವ ಹುಲ್ಲಿನ ಹಾದಿ ಎದುರಾಗುತ್ತದೆ. ಆಳೆತ್ತರಕ್ಕೆ ಬೆಳೆಯುವ ಈ ಹುಲ್ಲಿನ ಹಾದಿಯಲ್ಲಿ ಮತ್ತೂ ಒಂದೂವರೆ ಗಂಟೆ ನಡೆದರೆ ಮತ್ತೆ ಸಣ್ಣದೊಂದು ನೀರಿನ ತೊರೆ ಸಿಗುತ್ತದೆ. ಇದೇ ನೀರು ಮುಂದೆ ಹರಿದು, ಬೆಟ್ಟದ ಮೇಲಿಂದ ಜಲಪಾತವಾಗಿ ಧುಮ್ಮಿಕ್ಕುತ್ತದೆ.
ಸುನಿಲ್

No comments: